A hunter’s lucky call – ಬೇಟೆಗಾರನ ಅದೃಷ್ಟದ ಕರೆ 

ಒಂದು ಕಾಡಿನಲ್ಲಿ ಪ್ರಾಣಿಗಳನ್ನು ಬೇಟೆಯಾಡಿಕೊಂಡು ಬದುಕುತ್ತಿದ್ದ ಬೇಟೆಗಾರನಿದ್ದ, ಆದೊಂದು ಬಾರಿ ಅವನು ಕಾಡಿನಲ್ಲಿ ಹೋಗುತ್ತಿದ್ದಾಗ ಒಬ್ಬ ಋಷಿ ಕಾಡ್ಗಚ್ಚಿನಲ್ಲಿ ಸಿಲುಕಿ ಹೊರ ಬರಲಾಗದೆ ಪರಿತಪಿಸುವುದನ್ನು ನೋಡಿದ. ಕೂಡಲೇ ಬೇಟೆಗಾರ ಬೆಂಕಿಯನ್ನು ಆರಿಸಿ ಋಷಿಯನ್ನು ಪಾರು ಮಾಡಿದ. ಋಷಿಗೆ ಸಂತೋಷವಾಯಿತು. “ನೀನಂತಹ ಒಳ್ಳೆಯ ಮನುಷ್ಯ ಇಲ್ಲದೇ ಹೋಗಿದ್ದರೆ ಬೆಂಕಿಯಿಂದ ನಾನು ಪಾರಾಗುತ್ತಿರಲಿಲ್ಲ. ಎಲ್ಲ ಪ್ರಾಣಿಗಳಲ್ಲೂ ದಯೆ ತೋರಿ ಪ್ರೀತಿಯಿಂದ ವರ್ತಿಸು, ನಿನಗೆ ಒಳ್ಳೆಯದಾಗುತ್ತದೆ’ ಎಂದು ಹೇಳಿದ, ಬೇಟೆಗಾರನು ‘ಆದರೆ ನಾನು ಮೃಗಗಳನ್ನು ಬೇಟೆಯಾಡಿ ಬದುಕುವವನು. ಬೇರೆ ಯಾವ ಕೆಲಸವೂ ನನಗೆ ಗೊತ್ತಿಲ್ಲ. ನನಗೆ ಜೀವನದಲ್ಲಿ ಒಳ್ಳೆಯದಾಗುವುದು ಹೇಗೆ?” ಎಂದು ಕೇಳಿದ ಋಷಿಯು ‘ಚಿಂತಿಸಬೇಡ. ಇಲ್ಲೇ ಸನಿಹದ ಮರದ ಪೊಟರೆಯೊಂದರಲ್ಲಿ ಬಂಗಾರದ ಬಣ್ಣದ ಹಕ್ಕಿಯೊಂದಿದೆ. ಅದನ್ನು ಹಿಡಿದು ತಂದು ಮನೆಯಲ್ಲಿ ಸಾಕಿದರೆ ನಿನ್ನ ಅದೃಷ್ಟ ಖುಲಾಯಿಸಿ ದೇಶದ ರಾಜನಾಗುವ ಯೋಗ್ಯತೆ ನಿನ್ನದಾಗುತ್ತದೆ” ಎಂದನು.

ಬೇಟೆಗಾರನು ಸನಿಹದ ಮರಗಳಲ್ಲಿ ಹುಡುಕಿದಾಗ ಒಂದು ಮರದ ಪೊಟರೆಯಲ್ಲಿ ಬಂಗಾರದ ಬಣ್ಣದ ಹಕ್ಕಿ ಕಾಣಿಸಿತು. ಅದನ್ನು ಹಿಡಿದು ಮನೆಗೆ ತಂದ, ಪಂಜರದಲ್ಲಿಟ್ಟು ಪ್ರೀತಿಯಿಂದ ಕಾಳು, ನೀರು ಕೊಟ್ಟು ಸಾಕತೊಡಗಿದ. ಮುಂದೆ ತನ್ನ ಅದೃಷ್ಟದ ಬಾಗಿಲು ತೆರೆಯಲಿರುವ ಅದನ್ನು ಚೆನ್ನಾಗಿ ರಕ್ಷಿಸಿಕೊಂಡು ಬಂದ.ಒಂದು ದಿನ ರಾತ್ರೆ ಬೇಟೆಗಾರನ ಮನೆಯಂಗಳದಲ್ಲಿ ಕಾಲು ಗೆಜ್ಜೆಯ ಸದ್ದು ಕೇಳಿಸಿತು. ಅವನು ದೀಪ ಉರಿಸಿಕೊಂಡು ಹೊರಗೆ ಬಂದು ನೋಡಿದಾಗ ಆಭರಣಗಳಿಂದ ಅಲಂಕೃತಳಾದ ಒಬ್ಬಳು ಹೆಣ್ಣು ಅಲ್ಲಿ ನಿಂತಿದ್ದಳು. “ನಾನು ಸಂಪತ್ತಿನ ಒಡತಿ ಲಕ್ಷ್ಮಿ, ನಿನ್ನ ಮನೆಯಲ್ಲಿರಲು ಬಂದಿದ್ದೇನೆ. ಒಳಗೆ ಕರೆದುಕೋ’ಎಂದಳು.

“ಛೇ, ನಿನಗೆ ನಾನೇಕೆ ಆಶ್ರಯ ಕೊಡಲಿ? ಆದೃಷ್ಟದ ಬಾಗಿಲು ತೆರೆಯಬಲ್ಲ ಬಂಗಾರದ ವರ್ಣದ ಹಕ್ಕಿ ನನ್ನ ಮನೆಯೊಳಗಿದೆ. ಮುಂದೆ ಆದರಿಂದಾಗಿ ನಾನು ಸಕಲ ಐಶ್ವರ್ಯಗಳನ್ನೂ ಪಡೆಯಬಲ್ಲೆ. ನೀನು ನನಗೆ ಬೇಕಾಗಿಲ್ಲ’ ಎಂದನು ಬೇಟೆಗಾರ, ಮುಂದೊಂದು ದಿನ ಬೇಟೆಗಾರ ತನ್ನ ಹಕ್ಕಿಗೆ ಕಾಳು ತರಲು ಕಾಡಿಗೆ ಹೋಗಿದ್ದ. ಆಗ ಆ ದೇಶದ ರಾಜಕುಮಾರಿ ಪಲ್ಲಕಿಯಲ್ಲಿ ಕುಳಿತು ಯಾವುದೋ ಉತ್ಸವಕ್ಕೆ ಹೊರಟಿದ್ದಳು, ಆಗ ಕಳ್ಳರ ತಂಡವೊಂದು ಅವಳನ್ನು ಅಪಹರಿಸಲು ಸಿದ್ಧವಾಗಿ ಬಂತು, ರಾಜಕುಮಾರಿ ಆರ್ತಳಾಗಿ ಕೂಗಿಕೊಂಡಳು. ಬೇಟೆಗಾರ ಇದನ್ನು ಕಂಡು ವೀರಾವೇಶದಿಂದ ಹೋರಾಡಿ ಕಳ್ಳರನ್ನು ಓಡಿಸಿದ. ರಾಜಕುಮಾರಿ ಸಂತಸಗೊಂಡು, ‘ಆಯ್ಯಾ, ನಿನ್ನಿಂದಾಗಿ ನನ್ನ ಮಾನ ಪ್ರಾಣ ಎರಡೂ ಉಳಿಯಿತು. ನೀನು ನನ್ನನ್ನು ಮದುವೆಯಾಗಬೇಕು’ ಎಂದಳು.

ಆ ಮಾತಿಗೆ ಬೇಟೆಗಾರನು ನಿರಾಕರಿಸಿದ. ‘ಮುಂದೆ ನಾನು ದೊಡ್ಡ ಆದೃಷ್ಟವನ್ನು ಗಳಿಸಲಿದ್ದೇನೆ’ ಎಂದು ಹೇಳಿದ. ಹಕ್ಕಿಯ ಅಕ್ಕರೆಯಲ್ಲೇ ಬೇಟೆಗಾರ ತನ್ನ ಬದುಕಿನ ಬಹುಭಾಗವನ್ನು ಕಳೆದ, ಅವನ ಮೈ ಸುಕ್ಕು ಬಿದ್ದು ತಲೆಗೂದಲು ಹಣ್ಣಾಗಿ ಮುದುಕನಾದ. ಆಗ ಒಂದು ದಿನ ಹೊಂಬಣ್ಣದ ಹಕ್ಕಿ ಸಾವಿನ ಅಂಚು ತಲಪಿತು, ಅಯ್ಯೋ, ಋಷಿಯ ಮಾತು ಸುಳ್ಳಾಯಿತೇ? ಈ ಹಕ್ಕಿಯಿಂದಾಗಿ ನನ್ನ ಅದೃಷ್ಟದ ಬಾಗಿಲು ತೆರೆಯುತ್ತದೆ, ದೇಶದ ರಾಜನಾಗುತ್ತೇನೆಂದು ಅವನೆಂದಿದ್ದ. ಆದರೆ ಹಕ್ಕಿಯೇ ಸತ್ತು ಹೋಗುತ್ತಿದೆಯ! ಎಂದು ಪರಿತಪಿಸಿದ.

ಆಗ ಆ ಹಕ್ಕಿ ಹೇಳಿತು, ‘ಅಯ್ಯಾ, ಅದೃಷ್ಟ ಎರಡು ಸಲ ನಿನ್ನ ಮನೆ ಬಾಗಿಲು ತಟ್ಟಲು ಬಂದರೂ ನೀನು ತಿರಸ್ಕರಿಸಿದೆ. ಅದೃಷ್ಟಲಕ್ಷ್ಮಿ ಬಂದಾಗ ಮನೆಯೊಳಗೆ ಸೇರಿಸಿಕೊಳ್ಳಲಿಲ್ಲ. ರಾಜಕುಮಾರಿಯ ಕೈ ಹಿಡಿದರೆ ದೇಶದ ರಾಜ ನೀನೇ ಆಗುತ್ತಿದ್ದೆ. ಮುಂದೆ ದೊಡ್ಡ ಅದೃಷ್ಟ ಕಾದಿದೆಯೆಂದು ಸಿಕ್ಕಿದ ಅವಕಾಶವನ್ನು ಕೈಬಿಟ್ಟರೆ ಇನ್ನಾವ ಸ್ವರ್ಗದ ಜೀವನ ನಿನಗೆ ಸಿಗುತ್ತದೆ?’ ಎಂದು ಹೇಳಿ ಕಣ್ಣು ಮುಚ್ಚಿತು.

Leave a comment