ಅರಬ್‌ ರಾಜನ ಅಮೂಲ್ಯ ಉಡುಗೊರೆ

ಒಂದಾನೊಂದು ಕಾಲದಲ್ಲಿ ಮೊಘಲ್ ದೇಶದ ಸಮೀಪ ಒಂದು ಹಳ್ಳಿಯಲ್ಲಿ ಸಾವುಲ್ ಎಂಬಾತನು ಇದ್ದನು. ಅವನಿಗೆ ಯಾವಾಗಲೂ ಸಾಹಸ ಮಾಡುವುದೆಂದರೆ ಬಹಳ ಪ್ರೀತಿ. ಒಂದು ದಿನ ಒಬ್ಬ ಯಾತ್ರಿಕನು ಸಾವಲ್ ಇರುವ ಹಳ್ಳಿಗೆ ಬಂದಿದ್ದನು. ಅವನು ಅರಬ್ ದೇಶದ ಜನರಿಗೆ ಈರುಳ್ಳಿ ಎಂದರೆ ಏನು ಎಂಬುದು ಗೊತ್ತಿಲ್ಲ ಎಂಬ ಸುದ್ದಿಯನ್ನು ಸಾವಲ್‌ಗೆ ಹೇಳಿದನು. ಆಗ ಸಾವುಲ್‌ನು ‘ಈರುಳ್ಳಿ ಬಗ್ಗೆ ಗೊತ್ತಿಲ್ಲವೆ! ರುಚಿಯಾದ ಈರುಳ್ಳಿ ಇಲ್ಲದೆ ಜನರು ಆಹಾರವನ್ನು ಹೇಗೆ ತಿನ್ನುತ್ತಾರೆ’ ಎಂದು ತುಂಬಾ ಆಶ್ಚರ್ಯದಿಂದ ಕೇಳಿದನು. ಈರುಳ್ಳಿ ಬಗ್ಗೆ ಅರಿಯದ ಅರಬ್‌ ದೇಶದ ಜನರಿಗೆ ಅದನ್ನು ತಿಳಿಸಬೇಕೆಂದುಕೊಂಡ ಸಾವುಲ್ ಒಂದು ಗೋಣಿಚೀಲದ ತುಂಬಾ ಈರುಳ್ಳಿಯನ್ನು ತುಂಬಿಕೊಂಡು ಅರಬ್ ದೇಶಕ್ಕೆ ಹೋದನು. ಅಲ್ಲಿ ಅರಬ್‌ ರಾಜನಿಗೆ ನಮಸ್ಕರಿಸಿ ತಂದ ಈರುಳ್ಳಿಯನ್ನು ರಾಜನ ಮುಂದಿಟ್ಟು “ನಾನು ನಿಮ್ಮ ಆಹಾರದ ರುಚಿಯನ್ನು ವೃದ್ಧಿಸುವಂತಹ ಒಂದು ಆಮೂಲ್ಯವಾದ ಆಹಾರದ ವಸ್ತು ತಂದಿದ್ದೇನೆ’ ಎಂದು ಹೇಳಿದನು. ರಾಜನು ತನ್ನ ಅಡುಗೆಯವರಿಗೆ ಆ ಈರುಳ್ಳಿಯನ್ನು ಉಪಯೋಗಿಸಲು ಕೊಟ್ಟು ‘ಒಂದು ವೇಳೆ ನಾನು ಕಾಯಿಲೆ ಬಿದ್ದರೆ ನಿನ್ನ ತಲೆಯನ್ನು ಕತ್ತರಿಸುತ್ತೇನೆ’ ಎಂದು ಸಾವುಲ್‌ಗೆ ಎಚ್ಚರಿಸಿದನು.

ಮಾರನೆಯ ದಿನ ಸಾವುಲ್ ಈರುಳ್ಳಿಯಿಂದ ಅನೇಕ ತರಹದ ಭಕ್ಷ್ಯಗಳನ್ನು ಮಾಡಿಸಿ ಒಂದು ದೊಡ್ಡ ಔತಣ ಕೂಟವನ್ನು ಏರ್ಪಡಿಸಿ ಎಲ್ಲರನ್ನೂ ಆಹ್ವಾನಿಸಿದನು. ಭಕ್ಷ್ಯಗಳನ್ನು ತಿಂದ ರಾಜನಿಂದ ಹಿಡಿದು ಸಾಮಾನ್ಯ ಜನರವರೆಗೂ ಎಲ್ಲ ಜನರು ಸಂತೃಪ್ತಿಪಡುವುದನ್ನು ಸಾವುಲ್ ನೋಡಿದನು. ನಂತರ ಎಲ್ಲರೂ ಇನ್ನು ಮುಂದೆ ಈರುಳ್ಳಿ ಇಲ್ಲದೆ ಯಾವ ಆಹಾರ ಪದಾರ್ಥಗಳನ್ನೂ ತಿನ್ನುವುದಿಲ್ಲ ಎಂದು ಹೇಳಿದರು. ಅರಬ್‌ ದೇಶದ ರಾಜನಿಗೆ ತುಂಬಾ ಸಂತೋಷವಾಗಿ ಸಾವುಲ್ ತಂದ ಈರುಳ್ಳಿಗೆ ಸಮ ತೂಕದಷ್ಟು ಬಂಗಾರವನ್ನು ಕೊಟ್ಟನು. ಸಾವುಲ್ ತನ್ನ ಮನೆಗೆ ಹಿಂದಿರುಗಿ ತನ್ನ ಸಾಹಸದ ಬಗ್ಗೆ ಎಲ್ಲಾ ಹಳ್ಳಿಗರಿಗೆ ತಿಳಿಸಿದನು. ಆಗ ನದೀಮ್ ಎಂಬುವನು, ಆರಬ್ ದೇಶದ ರಾಜ ಈರುಳ್ಳಿಯನ್ನೇ ಇಷ್ಟು ಚೆನ್ನಾಗಿ ಸ್ವಾಗತಿಸಿರಬೇಕಾದರೆ ಇನ್ನು ಬೆಳ್ಳುಳ್ಳಿಯನ್ನು ಎಷ್ಟು ಮೆಚ್ಚಿಕೊಳ್ಳಬಹುದು. ಬೆಳ್ಳುಳ್ಳಿಯು ಆಹಾರದ ರುಚಿಯನ್ನು ಇನ್ನೂ ಹೆಚ್ಚಿಸುತ್ತದೆ. ಅರಬ್ ದೇಶದ ರಾಜನು ತನಗೆ ಅರ್ಧ ರಾಜ್ಯವನ್ನೇ ಕೊಡಬಹುದು ಎಂದು ಯೋಚಿಸಿದ, ನದೀಮ್ ನು ಐದು ಗೋಣಿಚೀಲದ ಭರ್ತಿ ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದೇ ಸ್ಥಳಕ್ಕೆ ತೆಗೆದುಕೊಂಡು ಹೋದನು. ರಾಜನು ಬೆಳ್ಳುಳ್ಳಿಯನ್ನು ಜನರಿಗೆ ಪರಿಚಯಿಸಲು ಒಪ್ಪಿಕೊಂಡನು. ನಂತರ ಅರಬ್‌ ದೇಶದ ರಾಜನಿಂದ ಹಿಡಿದು ಎಲ್ಲಾ ಜನರು ಬೆಳ್ಳುಳ್ಳಿ ಅಡುಗೆಯನ್ನು ಹೊಗಳಿ ತಿಂದು ಇದು ಈರುಳ್ಳಿಗಿಂತ ಚೆನ್ನಾಗಿ ರುಚಿಯಾಗಿದೆ ಎಂದರು.

ನಂತರ ಅರಬ್ ರಾಜನು ಇತರ ಮಂತ್ರಿಗಳ ಬಳಿ ನದೀಮ್ ನಿಗೆ ಬಂಗಾರಕ್ಕಿಂತ ಆಮೂಲ್ಯವಾದ ಉಡುಗೊರೆಯನ್ನು ಕೊಡುವುದಾಗಿ ಹೇಳಿದನು. ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿದ್ದರು. ನಂತರ ಅರಬ್ ರಾಜನು ನದೀಮ್ ನಿಗೆ ಐದು ಗೋಣಿ ಚೀಲದ ತುಂಬಾ ಈರುಳ್ಳಿಯನ್ನು ಉಡುಗೊರೆಯಾಗಿ ಕೊಟ್ಟು ಕಳಿಸಿದನು.

Leave a comment