Ashwini Kumars: ಅಶ್ವಿನಿ ಕುಮಾರರು

ನಮ್ಮ ಹಿರಿಯರು ಮಾತಾಡುವಾಗ ಅಶ್ವಿನಿ ಕುಮಾರರು ಎನ್ನುವ ಮಾತನ್ನು ಕೇಳಿರುತ್ತೇವಿ. ಕೆಲವರು ಅಶ್ವಿನಿ ದೇವತೆಗಳು ಎಂತಲೂ ಕರೆಯುತ್ತಾರೆ. ಈಗ ತಿಳಿಯೋಣ ಇವರು ಯಾರೆಂದು. ಇವರು ಸೂರ್ಯಭಗವಾನ ತಾಯಿ ಸಂಜ್ಞಾದೇವಿಯ ಮಕ್ಕಳು. ಇವರು ಹುಟ್ಟಿದ ಸಂದರ್ಭವೂ ವಿಶೇಷವಾಗಿದೆ. ತನ್ನ ಪತ್ನಿ ಸಂಜ್ಞಾದೇವಿಯು ಹೆಣ್ಣು ಕುದುರೆಯ ರೂಪ ತಾಳಿದ್ದನ್ನು ಕಂಡ ಸೂರ್ಯ ತಾನೂ ಗಂಡು ಕುದುರೆಯ ರೂಪ ತಾಳಿದ ಸಂದರ್ಭದಲ್ಲಿ ಹುಟ್ಟಿದವರೇ ಈ ಅಶ್ವಿನಿ ಕುಮಾರರು. ಇವರಿಬ್ಬರೂ ಅಪ್ರತಿಮ ಸುಂದರರು ಮತ್ತು ಯಾವಾಗಲೂ ಜೊತೆಯಲ್ಲೇ ಇರುವವರು. ಇವರ ವಾಸ ಸ್ವರ್ಗದಲ್ಲಿಯಾದರೂ ಆಗಾಗ ಭೂಮಿಗೆ ಬಂದು ನೇಗಿಲು ಹಿಡಿದು ಹೊಲ ಉಳುತ್ತಿದ್ದರು. ಇವರದು ಸ್ವರ್ಣಮಯ ರಥ. ಹೊಲ ಉಳುವ ನೇಗಿಲಿಗೆ ಒಂದು ಸಾರಿ ಹಂಸಗಳನ್ನು ಹೂಡಿದರೆ, ಇನ್ನೊಮ್ಮೆ ಗರುಡನನ್ನು, ಮತ್ತೊಮ್ಮೆ ಕತ್ತೆಗಳನ್ನೂ ಹೂಡುತ್ತಿದ್ದರು.

ಮೋದು ಎಂಬ ರಾಜ ಎಷ್ಟೇ ಶಕ್ತಿಶಾಲಿಯಾದರೂ ಯುದ್ಧದಲ್ಲಿ ಮಾತ್ರ ಸೋಲುತ್ತಿದ್ದ. ಮೋದುವಿನ ಮೇಲೆ ತುಂಬಾ ಪ್ರೀತಿ ಇದ್ದ ಇವರು ಮೋದುವಿಗೆ ಶುಭ್ರವರ್ಣದ ನೂರು ಕುದುರೆಗಳನ್ನು ನೀಡಿದ್ದರಿಂದ ಅವುಗಳ ಪ್ರಭಾವದಿಂದ ಮೋದು ಯುದ್ಧದಲ್ಲಿ ಜಯ ಗಳಿಸಿದ. ಒಂದು ಸಾರಿ ಅಸುರರು ರೇಭನೆಂಬ ಋಷಿಯ ಕೈಕಾಲುಗಳನ್ನು ಮುರಿದು ಒಂದು ಹಾಳು ಬಾವಿಯಲ್ಲಿ ಹಾಕಿದ್ದರು. ಪಾಪ ಋಷಿ ಸುಮಾರು ಹತ್ತು ರಾತ್ರಿಗಳನ್ನು ಆ ಹಾಳು ಬಾವಿಯಲ್ಲೇ ಕಳೆದರು. ಇದು ತಿಳಿದ ಅಶ್ವಿನಿ ಕುಮಾರರು ಆ ಋಷಿಯನ್ನು ಬೆಣ್ಣೆಯಿಂದ ಕೂದಲು ತೆಗೆದಂತೆ ಬಾವಿಯಿಂದ ಮೇಲೆತ್ತಿ ಆರೈಕೆ ಮಾಡಿದರು. ಅಶ್ವಿನಿ ಕುಮಾರರನ್ನು ಪ್ರಾರ್ಥಿಸಿ ವರ ಪಡೆಯುವುದು ಆಗಿನ ಕಾಲದ ಒಂದು ಪದ್ದತಿ ಆಗಿತ್ತು. ಇವರಿಬ್ಬರೂ ದೇವತೆಗಳ ವೈದ್ಯರು. ಚ್ಯವನ ಮಹರ್ಷಿಗೆ ಯೌವನ ಮತ್ತು ಸೌಂದರ್ಯವನ್ನು ದಯಪಾಲಿಸಿದವರು ಇವರು.

ಅಶ್ವಿನೀ ಕುಮಾರರು ನಾರಾಯಣನನ್ನುನೋಡಲು ಬ೦ದಾಗ ಅವನು ಲಕ್ಷ್ಮಿಯೊಡನೆ ಏಕಾಂತದಲ್ಲಿದ್ದನು. ಆಗ ದ್ವಾರಪಾಲಕರಾಗಿದ್ದ ಜಯ ವಿಜಯರು ಅಶ್ವಿನೀ ಕುಮಾರರನ್ನು ಒಳಗೆ ಬಿಡಲಿಲ್ಲ. ಆಗ ಅಶ್ವಿನಿ ಕುಮಾರರು ನಾವು ಬಂದಿರುವುದನ್ನು ನೀವುಗಳು ಇಲ್ಲಿಂದಲೇ ಮೂರು ಸಾರಿ ಹೇಳಿ ಎಂದರು. ಆದರೂ ಅವರಿಬ್ಬರೂ ಮೌನವಾಗಿರಲು ಸಿಟ್ಟಿನಿಂದ ನೀವು ಮೂರು ಸಾರಿ ಭೂಮಿಯಲ್ಲಿ ಜನಿಸಿರಿ ಎಂದ ಶಾಪ ಕೊಟ್ಟರು. ಅದರಿಂದಾಗಿಯೇ ಜಯ ವಿಜಯರು ಹಿರಣ್ಯಾಕ್ಷ-ಹಿರಣ್ಯ ಕಶಿಪು, ರಾವಣ-ಕುಂಭಕರ್ಣ ಮತ್ತು ಶಿಶುಪಾಲ-ದಂತವಕ್ರರಾಗಿ ಜನಿಸಿದರು. ಆದರೆ ಜಯವಿಜಯರೂ ಅಶ್ವಿನಿ ಕುಮಾರರಿಗೆ ನೀವೂ ಸಹ ಒಂದು ಸಾರಿ ಭೂಮಿಯಲ್ಲಿ ಜನಿಸಿರಿ ಎಂದು ಶಾಪ ಕೊಟ್ಟಿದ್ದರಿಂದ ಅವರಿಬ್ಬರೂ ಮಾದ್ರಿಯಲ್ಲಿ ನಕುಲ ಸಹದೇವರಾಗಿ ಹುಟ್ಟಿ ಮಹಾಭಾರತದ ಪಂಚ ಪಾಂಡವರಲ್ಲಿ ಸೇರಿದ್ದರು.

Leave a comment