Boy who became a great scientist – ದೊಡ್ಡ ವಿಜ್ಞಾನಿಯಾದ ದಡ್ಡ ಹುಡುಗ

ದಡ್ಡ ಹುಡುಗ ದೊಡ್ಡ ವಿಜ್ಞಾನಿಯಾದ ಕಥೆ ಇಲ್ಲಿ ಹೇಳಲಾಗಿದೆ. ಒಮ್ಮೆ ತಾಯಿ ಮಗನನ್ನು ಶಾಲೆಗೆ ದಾಖಲಿಸಬೇಕಾಗಿತ್ತು. ಆದರೆ ಮಗುವಿಗೆ ಸ್ವಲ್ಪ ವಿಕಲಾಂಗತೆಯಿತ್ತು. ಆದರೆ ಶಾಲೆಗೆ ದಾಖಲಿಸಬೇಕು. ಏನಾದರಾಗಲಿ ಮಗುವಿಗೆ ಶಿಕ್ಷಣ ಕೊಡಿಸುವುದು ತಾಯಿ ತಂದೆಗಳ ಕರ್ತವ್ಯವೆಂದೂ ಹಾಗೂ ಮಗುವಿನ ಉಜ್ವಲ ಭವಿಷ್ಯಕ್ಕೆ ಶಿಕ್ಷಣ ಅವಶ್ಯವೆಂದೂ ಬಗೆದು, ಶಾಲೆಗೆ ಮಗುವನ್ನು ಕರೆದುಕೊಂಡು ಹೋದಳು. ಆದರೆ ಶಾಲೆಯಲ್ಲಿ ಮಗುವಿನ ಕಲಿಕೆಯ ಮಟ್ಟವನ್ನು ಪರೀಕ್ಷಿಸಿಯೇ ದಾಖಲಾತಿಗೆ ಅವಕಾಶವಿತ್ತು. ಹಾಗಾಗಿ ಮಗುವನ್ನು ಒಮ್ಮೆಲೆ ದಾಖಲಾತಿ ಮಾಡಲಾಗಲಿಲ್ಲ. ಮಗುವಿನ ಕಲಿಕೆಯ ಗುಣಮಟ್ಟವನ್ನು ಪರೀಕ್ಷಿಸುವುದರ ಸಲುವಾಗಿ ಶಿಕ್ಷಕರ ಕಡೆಗೆ ಕರೆದೊಯ್ಯಲಾಯಿತು.

ಶಿಕ್ಷಕರು ಮಗುವಿನ ಸಾಮರ್ಥ್ಯವನ್ನು ಪರೀಕ್ಷಿಸ ತೊಡಗಿದರು. ಮಗುವು ಉತ್ತರ ಕೊಡಲು ಅಸಮರ್ಥನಾದನು, ಆಗ ಶಿಕ್ಷಕರು ತಾಯಿಗೆ ‘ನಿಮ್ಮ ಮಗು ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವುದಿಲ್ಲ ಹಾಗೂ ಅವನಿಗೆ ಕಿವಿಯ ತೊಂದರೆಯಿದೆ. ನಾವು ಕೇಳಿದ ಪ್ರಶ್ನೆಗಳು ಅವನಿಗೆ ಅರ್ಥವಾಗುವುದಿಲ್ಲ ಮೇಲಾಗಿ ಅವನಿಗೆ ಶಿಕ್ಷಣ ದೊರೆಯುವುದು ಸಾಧ್ಯವಿಲ್ಲ. ಈ ಮಗುವನ್ನು ಮರಳಿ ಕರೆದುಕೊಂಡು ಮನೆಗೆ ಹೋಗಿ ಯಾವುದಾದರೊಂದು ಉದ್ಯೋಗದಲ್ಲಿ ತೊಡಗಿಸಿರಿ ಎಂದರು. ಈ ಮಾತುಗಳನ್ನು ಕೇಳಿಸಿಕೊಂಡ ತಾಯಿಗೆ ಸಹನವಾಗಲಿಲ್ಲ. ಆಗ ತಾಯಿ ಶಿಕ್ಷಕರಿಗೆ ‘ನನ್ನ ಮಗನು ದಡ್ಡನಲ್ಲಿ ಕಿವಿಯ ಸ್ವಲ್ಪ ತೊಂದರೆಯಿದೆ’ ಎಂದು ಹೇಳಿದರೂ ಶಿಕ್ಷಕರು ಒಪ್ಪಲಿಲ್ಲ.ತಾಯಿ ಮಗನನ್ನು ಕರೆತರುವ ಮುನ್ನ ಆ ಶಿಕ್ಷಕರಿಗೆ ಹೀಗೆ ಹೇಳಿದಳು, “ನೋಡಿ ಶಿಕ್ಷಕರೆ- ಈ ನನ್ನ ಮಗನನ್ನು ಜಗದ ದೊಡ್ಡ ವಿಜ್ಞಾನಿಯನ್ನಾಗಿ ಮಾಡುತ್ತೇನೆ. ಹೀಗೆ ನಾನು ಶಪಥ ಮಾಡಿ ಹೇಳುತ್ತೇನೆ ಎಂದು ಹೇಳಿ ತನ್ನ ಮಗನನ್ನು ಕರೆ ತಂದಳು. ಮನೆಯಲ್ಲಿಯೇ ಪಾಠ ಪ್ರವಚನಗಳು ಆರಂಭವಾದವು ದಿನಾಲು ಶಿಕ್ಷಕರು ಮನೆಗೆ ಬಂದು ಮಗುವಿಗೆ ಪಾಠ ಮಾಡತೊಡಗಿದರು. ಮಗು ಚುರುಕಿನದಾಗಿತ್ತು. ಬೇಗ ಬೇಗ ಕಲಿಯುತ್ತ ಸಾಗಿದ. ತಾಯಿ ಮಗುವಿಗೆ ಮನೆಯಲ್ಲಿಯೇ ಒಂದು ಪ್ರಯೋಗ ಶಾಲೆಯನ್ನು ಮಾಡಿಕೊಟ್ಟಳು. ಮಗುವಿಗೆ ವಿಜ್ಞಾನದಲ್ಲಿ ತುಂಬಾ ಆಸಕ್ತಿಯಿತ್ತು. ಹೀಗಾಗಿ ಮನೆಯಲ್ಲಿಯೇ ಮಗ ಪ್ರಯೋಗಗಳನ್ನು ಮಾಡತೊಡಗಿದ. ಅನೇಕ ವಿಜ್ಞಾನಿಗಳೂ ಒಂದು ಮಾರ್ಗದರ್ಶನ ಮಾಡತೊಡಗಿದರು. ಮುಂದೆ ಪ್ರಯೋಗಕ್ಕೆ ಈ ಮನೆಯ ಪ್ರಯೋಗಶಾಲೆ ಸಾಲದಾಯಿತು. ಆಗ ತಾನೇ ದೊಡ್ಡ ಪ್ರಯೋಗ ಶಾಲೆಯನ್ನು ತೆರೆದ. ಇದರಿಂದ ಹೆಚ್ಚಿನ ಶೋಧನೆಗೆ ಅವಕಾಶವಾಯಿತು.

ದಿನೇ ದಿನೇ ಪ್ರಯೋಗಗಳನ್ನು ಮಾಡುತ್ತ ಹೊಸ ಹೊಸ ಆವಿಷ್ಕಾರಗಳಿಗೆ ಮುಂದಾದ ಅವುಗಳಲ್ಲಿ ಯಶಸ್ವಿಯೂ ಆದ. ಮುಂದೆ ಸಾವಿರಾರು ಯಂತ್ರಗಳ ಶೋಧಕನಾದ. ಹಲವಾರು ಯಂತ್ರಗಳ ದೋಷಗಳನ್ನು ನಿವಾರಿಸಿದ. ನೋಬೆಲ್ ಪ್ರಶಸ್ತಿಯನ್ನೂ ಪಡೆದ. ಜಗತ್ತಿನಲ್ಲಿ ಬಹುದೊಡ್ಡ ವಿಜ್ಞಾನಿ ಎನಿಸಿದ. ಮನು ಕುಲಕ್ಕೆ ದಿವ್ಯ ಕೊಡುಗೆಗಳನ್ನಿತ್ತ ಮಹಾಪುರುಷ ಅವನೇ ಹೆಸರಾಂತ ವಿಜ್ಞಾನಿ ‘ಥಾಮಸ್‌ ಅಳ್ವಾ ಎಡಿಸನ್”, ಹೀಗೆ ದಡ್ಡ ಹುಡುಗ ದೊಡ್ಡ ವಿಜ್ಞಾನಿಯಾದ.

Leave a comment