ದೇವೇಂದ್ರ ಮತ್ತು ಏಳು ನಕ್ಷತ್ರಗಳು

ದೇವೇಂದ್ರ ಮತ್ತು ಏಳು ನಕ್ಷತ್ರಗಳು

ಪುರಾಣ ಕಾಲದಲ್ಲಿ ದೇವೇಂದ್ರನಿಗೆ ಸ್ವರ್ಗ ಲೋಕದ ಅಧಿಪತ್ಯವು ಬಂದ ಕೂಡಲೇ ಭೂಲೋಕಕ್ಕೆ ಒಳಿತಾಗಲು ಏಳು ನಕ್ಷತ್ರಗಳನ್ನು ಕರೆದನು. ಒಮ್ಮೆಗೇ ಎದ್ದ ನಕ್ಷತ್ರ ಪ್ರಕಾಶವನ್ನು ಭೂಲೋಕ ನಿವಾಸಿಗಳೆಲ್ಲ ಬೆರಗಾಗಿ ತಲೆಯೆತ್ತಿ ನೋಡಿದರು. ‘ಭೂಲೋಕದ ಜನತೆಗೆಲ್ಲಾ ಸೌಖ್ಯವಾಗುವ ಹಾಗೆ ಮಾಡಬೇಕೆಂದು ಆಲೋಚಿಸಿದ್ದೇನೆ. ಆದರೆ ಸುಮ್ಮನೆ ಕೊಟ್ಟರೆ ಯಾವ ವಸ್ತುವಿಗೂ ಬೆಲೆ ಇರುವುದಿಲ್ಲ. ಆದುದರಿಂದ ನೀವು ಏಳು ಮಂದಿ ನಾನು ಕೊಡುವ ವಸ್ತುಗಳನ್ನು ಸರಿಯಾದ ಬೆಲೆಗೆ ವಿಕ್ರಯಿಸಿ ಬರಬೇಕು’ ಎಂದನು ದೇವೇಂದ್ರ, ಅಪ್ಪಣೆ ಮಹಾಪ್ರಭು ಎಂದು ಏಳು ನಕ್ಷತ್ರಗಳೂ ಹೇಳಿದವು. ಹೊಸದಾಗಿ ಕಾಣುವ ಅದ್ಭುತ ಪ್ರಕಾಶವನ್ನು ಆಶ್ಚರ್ಯದಿಂದ ನೋಡುತ್ತಿದ್ದ ಜನರಿಗೆ ಆಕಾಶದಿಂದ ಅಮರ ಗಾನವು ಇಂಪಾಗಿ ಕೇಳಿಸತೊಡಗಿತು.

ದೇವೇಂದ್ರನು ಮೊದಲನೇ ನಕ್ಷತ್ರದ ಕೈಗೆ ಒಂದು ಬಂಗಾರದ ಭರಣಿಯನ್ನು ಕೊಟ್ಟು ಇದರಲ್ಲಿ ಹಾಸ್ಯ ರಸವಿದೆ. ಇದನ್ನು ಸೇವಿಸಿದವರಿಗೆ ಸಂತೋಷವನ್ನು ಕೊಡುತ್ತದೆ’ ಎಂದನು. ಎರಡನೇ ಚುಕ್ಕೆಯ ಕೈಗೆ ಒಂದು ಭರಣಿಯನ್ನು ಕೊಟ್ಟು ‘ಇದರಲ್ಲಿ ಸೌಶೀಲ್ಯತಾ ರಸವಿದೆ, ಇದರಿಂದ ಜೀವಶಕ್ತಿ ಹೆಚ್ಚುತ್ತದೆ’ ಎಂದನು. ಮೂರನೇ ಚುಕ್ಕೆಗೆ ಆರೋಗ್ಯ ರಸದ ಭರಣಿ ಕೊಟ್ಟು ‘ಆರೋಗ್ಯವೇ ಮಹಾಭಾಗ್ಯ’ ಎಂದನು. ನಾಲ್ಕನೇ ಚುಕ್ಕೆಯ ಕೈಗೆ ಒಂದು ಭರಣಿ ಕೊಟ್ಟು ಇದರಲ್ಲಿ ಜೀವಸತ್ವ ರಸವಿದೆ. ಯಾವ ಜೀವಿಯಾದರೂ ದೀರ್ಘಕಾಲ ಬದುಕಿಕೊಂಡಿದ್ದರೇನೇ ಕೆಲಸ ಮಾಡಲು ಸಾಧ್ಯ’ ಎಂದು ಹೇಳಿದನು. ಐದನೇ ಚುಕ್ಕೆಯ ಕೈಗೆ ಒಂದು ಭರಣಿಯನ್ನು ಕೊಟ್ಟು ‘ಇದು ಕೀರ್ತಿ ರಸದ್ದು. ಹೆಸರು ಉಳಿಸಿಕೊಳ್ಳಲು ಇದು ಅಗತ್ಯ’ ಎಂದನು. ಆರನೇ ಚುಕ್ಕೆಯ ಕೈಗೆ ಒಂದು ಭರಣಿ ಕೊಟ್ಟು ‘ಆನಂದ ರಸದ ಭರಣಿ ಇದು”, ‘ಇದು ಐಶ್ವರ್ಯ ರಸದ ಭರಣಿ. ಜೀವನ ಕಾಲವು ಸರಿಯಾಗಿ ಸಾಗಬೇಕಾದರೆ ಇದು ಅತ್ಯಗತ್ಯ’ ಎಂದು ಏಳನೇ ಚುಕ್ಕೆಗೆ ಒಂದು ಭರಣಿ ಕೊಟ್ಟನು ದೇವೇಂದ್ರ.

ಏಳೂ ನಕ್ಷತ್ರಗಳು ಸಾಧಾರಣ ಸ್ತ್ರೀ ರೂಪಗಳಿಂದ ಭೂಲೋಕಕ್ಕೆ ಬಂದ ವು. ಮೊದಲನೇ ಮೂರು ಚುಕ್ಕೆಗಳು ಭರಣಿಗಳ ಗುಣ ಹೇಳುತ್ತಾ ಎಷ್ಟು ತಿರುಗಿದರೂ ಕೊಂಡುಕೊಳ್ಳುವವರಿಲ್ಲದೆ ಹೋದರು. ನಾಲ್ಕನೇ ಚುಕ್ಕೆ ಬೀದಿಗಳಲ್ಲಿ ತಿರುಗುತ್ತಾ ‘ದೀರ್ಘ ಜೀವಿಗಳಾಗಬೇಕೆ? ಜೀವಸತ್ವರಸ ಕುಡಿಯಿರಿ’ ಎಂದು ಹೇಳುತ್ತಾ ತಿರುಗುವಾಗ, ‘ನಮಗೆ ಬೇಕು, ನಮಗೆ ಬೇಕು’ ಎಂದು ಒಬ್ಬರ ಮೇಲೊಬ್ಬರು ಕೈಚಾಚಿದರು. ‘ನಮ್ಮ ಅಕ್ಕ ತಂಗಿಯರು ವಿಕ್ರಯಿಸುವ ವಸ್ತುಗಳನ್ನು ಕೊಂಡುಕೊಂಡಿರಾ? ದೊಡ್ಡಕ್ಕನ ಭರಣಿಯಲ್ಲಿ ಹಾಸ್ಯರಸ, ಎರಡನೇ ಅಕ್ಕನ ಹತ್ತಿರ ಸೌಶೀಲ್ಯತೆಯ ರಸ, ಮೂರನೇ ಅಕ್ಕನ ಹತ್ತಿರ ಆರೋಗ್ಯ ರಸ ಇದ್ದುವಲ್ಲಾ? ಕೊಂಡಿರಾ? ಐದನೇ ತಂಗಿ ಕೀರ್ತಿರಸ, ಆರನೆಯವಳು ಮಾರುವ ಆನಂದ ರಸ, ಏಳನೆಯವಳು ಐಶ್ವರ್ಯ ರಸ ಎಲ್ಲ ಮಾರುತ್ತಿದ್ದರಷ್ಟೇ . ಅವುಗಳನ್ನು ನೀವು ಕೊಂಡುಕೊಂಡಿಲ್ಲವೇ?’ ಎಂದು ಕೇಳಿದಳು ನಾಲ್ಕನೇ ಚುಕ್ಕೆ ಸಿಕ್ಕಿ

‘ಇಲ್ಲ ಇಲ್ಲ’ ಎಂದರು ಜನ. ‘ಅವುಗಳು ಯಾವುದೂ ಇಲ್ಲದಿದ್ದರೆ ನನ್ನ ಭರಣಿಯಲ್ಲಿರುವ ಔಷಧದಿಂದ ನಿಮಗೆ ಯಾವ ಪ್ರಯೋಜನವೂ ಆಗದು. ಅವೆಲ್ಲವೂ ಇರುವವರೆಗೆ ಮಾತ್ರವೇ ದೀರ್ಘಕಾಲ 9 ಜೀವಿಸುವ ಸೌಕರ್ಯ ಬರುತ್ತದೆ. ಜೀವನದ ಕಾಲವು ಸಾರ್ಥಕವಾಗುತ್ತದೆ’ ಎಂದು ಹೇಳಿ ತನ್ನ ಮುಚ್ಚಳವನ್ನು ಬಿಗಿಯಾಗಿ ಬಿಗಿದುಕೊಳ್ಳುತ್ತಾಳೆ ನಾಲ್ಕನೇ ಚುಕ್ಕೆ. ಆದರೆ ಮಾದರಿಗಾಗಿ ತಂದಿದ್ದ ಭರಣಿಯಿಂದ ಕೈಗೆ ಸುರಿದುಕೊಂಡಿದ್ದನ್ನು ಮತ್ತೆ ಭರಣಿಗೆ ಸೇರಿಸಲು ಇಷ್ಟವಿಲ್ಲದೆ, ಅತ್ತಿತ್ತ ನೋಡುತ್ತಾಳೆ. ಅಲ್ಲಿಯೇ ಒಂದು ಮರದ ಕೊಂಬೆಯಲ್ಲಿದ್ದ ಗಿಳಿಯನ್ನು ನೋಡಿ ನಾಲ್ಕನೇ ಚುಕ್ಕೆ ಆ ಗಿಳಿಯ ಮೂಗಿಗೆ ತನ್ನ ಕೈಯನ್ನು ತೋರಿಸುತ್ತಾಳೆ. ಅದು ಅವಳ ಕೈಯಲ್ಲಿದ್ದುದನ್ನೆಲ್ಲಾ ಒರೆಸಿ ತಿನ್ನುತ್ತದೆ. ಆ ಕಾರಣದಿಂದ ಆ ಸುಂದರ ಶುಕ ಮುನ್ನೂರು ವರ್ಷಗಳವರೆಗೆ ಬದುಕುತ್ತದೆ. ಮಾನವರು ಮಾತ್ರ ಚಿರಜೀವತ್ವದ ಆಶೆಯಲ್ಲಿ ಚುಕ್ಕೆಗಳು ಹೇಳಿದಂಥವುಗಳಾಗಿ ಏನೇನೋ ಮಾಡುತ್ತಾ ಕರ್ಮಭೂಮಿಯಲ್ಲಿ ತೊಳಲಾಡಿಕೊಂಡಿರುವಂತೆ ಆಗುತ್ತದೆ.

Leave a comment