ಚಿನ್ನದಾತ ನಾಯಿ – Golden Dog

ಚಿನ್ನದಾತ ನಾಯಿ

ಸುರಪ್ಪನ ತೋಟದ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಧೈರ್ಯ ತೋಟದಂಚಿನಲ್ಲಿ ಒಂದು ನಾಯಿಯು ನೋವಿನಿಂದ ‘ಕುಂಯ್ ಎಂದು ಅಳುವುದು ಕೇಳಿಸಿತು ಧೈರ್ಯನಿಗೆ ಪ್ರಾಣಿಗಳೆಂದರೆ ಪ್ರಾಣ. ಅವನು ತಕ್ಷಣ ಅದರತ್ತ ಓಡಿದ. ನಾಯಿಮರಿಯ ಕಾಲಿಗೆ ಪೆಟ್ಟಾಗಿತ್ತು. ಧೈರ್ಯ ಮರಿಯನ್ನು ಎತ್ತಿಕೊಂಡಾಗ, ಸೂರಪ್ಪ ಧೈರ್ಯನಿಗೆ ಬೈದ. “ತೋಟದಲ್ಲಿ ತಾರಿ ಗಿಡಗಳ ಮೇಲೆ ಕುಣೀತ್ತಿತ್ತು ಈ ನಾಯಿಮರಿ, ಕೋಲಿನಿಂದ ಬಾರಿಸಿದೆ ನೋಡು, ಕುಂಯ್ ಕುಂಯ್ ಅಂತ ಇಲ್ಲಿ ಬಂದು ಬಿದ್ದಿದೆ. ಅದನ್ನೇಕೆ ಎತ್ತಿಕೊಳ್ಳಿಯ? ಕಾಲು ಸರಿಯಾದರೆ ಮತ್ತೆ ತೋಟದಲ್ಲಿ ಹಾವಳಿ ಮಾಡುತ್ತದೆ. ಎಸಿ ಆಚೆ ಎಂದ.ಧೈರ್ಯನಿಗೆ ಮನಸ್ಸು ಬರಲಿಲ್ಲ. ಅವನು ಮಾತಾಡದೇ ಮರಿಯನ್ನು ಮನೆಗೆ ಕರೆದೊಯ್ದ. ಅದರ ಕಾಲಿಗೆ ಮುಲಾಮು ಹಚ್ಚಿ, ಬಟ್ಟೆ ಕಟ್ಟಿ, ಬೆಚ್ಚಗೆ ಗೋಣೀಚೀಲದ ಮೇಲೆ ಮಲಗಿಸಿದ. ನಾಯಿಮರಿಗೆ ಮೈ ತುಂಬ ಕೂದಲಿತ್ತು. ಅದರ ಎರಡು ಕಿವಿಗಳ ನಡುವೆ ಒಂದು ರೂಪಾಯಗಲದ ಗುಳಿ ಇತ್ತು. ಧೈರ್ಯ ಪ್ರೀತಿಯಿಂದ ನಾಲ್ಕು ದಿನ ಅದರ ಆರೈಕೆ ಮಾಡಿದ. ನಾಯಿಮರಿಯ ಕಾಲು ಮೊದಲಿನಂತಾಯಿತು. ಧೈರ್ಯ ಬಡವನಾದರೂ, ಪ್ರತಿನಿತ್ಯ ತನ್ನ ಪಾಲಿನ ಊಟದಲ್ಲಿ ಅರ್ಧ ಅದಕ್ಕೆ ತಿನಿಸುತ್ತಿದ್ದ. ಅದರೊಂದಿಗೆ ಆಡುತ್ತಿದ್ದ, ಓಡುತ್ತಿದ್ದ, ಹೊರಗೆ ತಿರುಗಾಡಿಸುತ್ತಿದ್ದ. ನಾಯಿಮರಿ ಧೈರ್ಯನ ಮನೆಗಾವಲಿಗೆ ನಿಂತಿತು.

ಒಂದು ದಿನ ಧೈರ್ಯ ನಾಯಿಮರಿಗೆ ಸ್ನಾನ ಮಾಡಿಸುವಾಗ, ಅದರ ನೆತ್ತಿಯ ಗುಳಿಯಿಂದ ಒಂದು ಬಂಗಾರದ ನಾಣ್ಯ ಠಣ್ಣೆಂದು ಕೆಳಗೆ ಬಿತ್ತು. ಧೈರ್ಯ ಆಶ್ಚರ್ಯದಿಂದ ಅದನ್ನು ಅವನಮ್ಮನಿಗೆ ತೋರಿಸಿದ. ಅವಳೂ ಬೆರಗಾಗಿ, ಅಕ್ಕಸಾಲಿಗೆ ತೋರಿಸಿದಳು. “ಅರೆ! ಅಪ್ಪಟ ಬಂಗಾರವಿದು. ಯಾರು ಕೊಟ್ಟರು ನಿನಗಿದನ್ನು? ಯಾವ ಕೆಲಸಕ್ಕೆ? ಎಂದು ನಾಣ್ಯಕ್ಕೆ ತಕ್ಕ ಹಣವನ್ನು ಕೊಟ್ಟ ಅಕ್ಕಸಾಲಿ. ಧೈರ್ಯ ನಾಯಿಮರಿಗೆ ಚಿನ್ನದಾತ ಎಂದೇ ಹೆಸರಿಟ್ಟ.

ಅದರ ನೆತ್ತಿಯ ಗುಳಿಯಲ್ಲಿ ಬಂಗಾರದ ನಾಣ್ಯ ಚಿಕ್ಕದಾಗಿ ಹುಟ್ಟಿ, ದಿನೇ ದಿನೇ ಬೆಳೆದು, ತಿಂಗಳಾದ ಮೇಲೆ ಕೆಳಗುದುರುತ್ತಿತ್ತು. ಹೀಗೆ ತಿಂಗಳಿಗೊಮ್ಮೆ ನೆತ್ತಿಯಿಂದ ನಾಣ್ಯ ಉದುರಿಸುತ್ತಿತ್ತು ಅದು. ಧೈರ್ಯ ಅದನ್ನು ಅಕ್ಕಸಾಲಿಗೆ ಕೊಟ್ಟು ಹಣ ಪಡೆಯುತ್ತಿದ್ದ. ಆ ಹಣದಲ್ಲಿ ಅವನು ಸ್ವಂತಮನೆ ಕಟ್ಟಿಸಿದ. ಸ್ವಂತದೊಂದು ಹೊಲ ಖರೀದಿಸಿದ. ಮಕ್ಕಳನ್ನೂ ಓದಿಸತೊಡಗಿದ.ಈ ವಿಷಯ ಸೂರಪ್ಪನಿಗೆ ತಿಳಿಯಿತು. ಅವನು ಕೂಡಲೇ ಧೈರ್ಯನಿದ್ದಲ್ಲಿಗೆ ಬಂದು, ಈ ನಾಯಿ ನನ್ನ ಹೊಲದಲ್ಲಿತ್ತು. ಇದು ನನಗೆ ಸೇರಿದ್ದು. ನಾನು ಇದನ್ನು ನಿನಗೆ ಒಯ್ಯಲು ಬಿಡದಿದ್ದರೆ ನಿನಗೆಲ್ಲಿ ಬಂಗಾರ ಸಿಗುತ್ತಿತ್ತು? ಇದನ್ನು ಮನೆಗೊಯ್ಯುತ್ತೇನೆ ಎಂದು ಧೈರ್ಯನ ಮನೆಯಿಂದ ಬಲವಂತವಾಗಿ ನಾಯಿಮರಿಯನ್ನು ಎಳೆದೊಯ್ದ.

ತನ್ನ ಪ್ರೀತಿಯ ನಾಯಿಮರಿಯನ್ನು ಬಿಟ್ಟಿರಲಾಗದೇ ಅತ್ತು ಬಿಟ್ಟ ಧೈರ್ಯ. ಆದರೆ ಸೂರಪ್ಪ ಆ ಮರಿಯನ್ನು ಚಿನ್ನಕ್ಕಾಗಿಯೇ ಎಳೆದೊಯ್ದಿದ್ದ. ಅವನಿಗೆ ಅದರ ಮೇಲೆ ಎಳ್ಳಷ್ಟೂ ಪ್ರೀತಿ ಇರಲಿಲ್ಲ. ಅದನ್ನು ನೋಡಿಕೊಳ್ಳುವ ತಾಳ್ಮೆಯೂ ಇರಲಿಲ್ಲ. ಎಷ್ಟು ದಿನಕ್ಕೊಮ್ಮೆ ಚಿನ್ನ ಉದುರಿಸುತ್ತದೆಂಬುದೂ ತಿಳಿದುಕೊಳ್ಳಲಿಲ್ಲ. ಅವನು ಅದಕ್ಕೆ ಸರಿಯಾಗಿ ತಿನ್ನಲು ಕೊಡದೇ, ಅದು ಉದುರಿಸುವ ಬಂಗಾರದ ನಾಣ್ಯಕ್ಕಾಗಿ ಕಾಯುತ್ತಿದ್ದ. ಪಕ್ಷವಾದರೂ ಚಿನ್ನ ಸಿಗಲಿಲ್ಲವೆಂದು ಚೆನ್ನಾಗಿ ಹೊಡೆದ. ಧೈರ್ಯನನ್ನು ನೆನಸಿಕೊಂಡು ನಾಯಿಮರಿ ಕೊರಗಿತು. ಪ್ರೀತಿಯಿಲ್ಲದೆ ಸೊರಗಿತು. ಹಸಿವಿನಿಂದ ಕಂಗೆಟ್ಟಿತು. ಸೂರಪ್ಪನ ಹೊಡೆತಕ್ಕೆ ಕೊನೆಗೊಮ್ಮೆ ಸತ್ತೇ ಹೋಯಿತು.

ಹೊಟ್ಟೆಕಿಚ್ಚಿನಿಂದ ಯಾರ ಬೆಳವಣಿಗೆಯೂ ಆಗುವುದಿಲ್ಲ ಮತ್ತು ನಾಯಿ ಸಾಕುವಂತಹ ಸಣ್ಣ ಕೆಲಸವೇ ಇರಲಿ ಮನಸ್ಪೂರ್ವಕವಾಗಿ ಮಾಡದಿದ್ದರೆ ಒಳ್ಳೆಯ ಫಲಿತಾಂಶ ಸಿಗುವುದಿಲ್ಲ.

Leave a comment