ಕಾಡೆಮ್ಮೆ ನಾಯಿಗಳ ಜಾಣತನ

ದಟ್ಟವಾದ ಕಾಡು. ಆ ಕಾಡಿಗೆ ಹುಲಿಯೊಂದು ರಾಜನೆನಿಸಿಕೊಂಡಿತ್ತು. ಅಲ್ಲಿನ ಪ್ರಾಣಿಗಳ ರಕ್ಷಣೆಯ ಜವಾಬ್ದಾರಿ ಹೊತ್ತಿತ್ತು, ಆದರೆ ಕ್ರಮೇಣ ಕಾಡಿನ ಸಣ್ಣಪುಟ್ಟ ಪ್ರಾಣಿಗಳಲ್ಲದೇ ದೊಡ್ಡ ಪ್ರಾಣಿಗಳನ್ನು ಹಿಡಿದು ತಿನ್ನತೊಡಗಿತು. ಇದರಿಂದಾಗಿ ಕಾಡಿನಲ್ಲಿ ಬಹುತೇಕ ಪ್ರಾಣಿಗಳು ಖಾಲಿಯಾದವು. ಆದರೆ ಅದೇ ಕಾಡಿನಲ್ಲಿದ್ದ ಕಾಡೆಮ್ಮೆಯನ್ನು ಹುಲಿ ಹಿಡಿದಿರಲಿಲ್ಲ. ಕಾಡಿನಲ್ಲಿ ಒಂದು ಪ್ರಾಣಿಯಾದರೂ ಇರಲಿ ಎಂದುಕೊಂಡು ಅದನ್ನು ತಿನ್ನದೇ ಹಾಗೆಯೇ ಬಿಟ್ಟಿತ್ತು. ಇದನ್ನು ತಿಳಿದುಕೊಂಡ ಕಾಡೆಮ್ಮೆ ಧೈರ್ಯವಾಗಿ ಹುಲಿಯ ಬಳಿ ತೆರಳಿ ನೀನು ಕಾಡಿನಲ್ಲಿರುವ ಪ್ರಾಣಿಗಳ ಹಿಡಿದು ತಿನ್ನುತ್ತಿರುವುದು ಸರಿಯಲ್ಲ’ ಎಂದು ಆಕ್ಷೇಪಿಸಿತು. ಇದರಿಂದ ಸಿಟ್ಟಿಗೆದ್ದ ಹುಲಿ ಇದು ನನ್ನ ಕಾಡು, ನನಗೆ ಇಲ್ಲಿ ಏನೂ ಬೇಕಾದರೂ ಮಾಡಲು ಅಧಿಕಾರವಿದೆ. ಸುಮ್ಮನಿರದಿದ್ದರೆ ನಿನ್ನನ್ನೇ ತಿಂದು ಮುಗಿಸುತ್ತೇನೆಂದು ಬೆದರಿಕೆ ಹಾಕಿತು. ಹುಲಿಯನ್ನು ಎದುರಿಸುವ ಶಕ್ತಿ ಇಲ್ಲದಿದ್ದರಿಂದ ಕಾಡೆಮ್ಮೆ ಸುಮ್ಮನಾಯಿತು. ಆದರೆ ಹುಲಿಯ ಸೊಕ್ಕು ಮುರಿಯಲು ಯೋಚಿಸತೊಡಗಿತು.

ಇತ್ತ ಕಾಡಿನಲ್ಲಿ ಪ್ರಾಣಿಗಳು ಖಾಲಿಯಾಗಿದ್ದರಿಂದ ಆಹಾರ ಸಿಗದೇ ಹುಲಿ ಕಾಡಿನಂಚಿನ ಹಳ್ಳಿಗಳತ್ತ ನುಗ್ಗತೊಡಗಿತು. ಅಲ್ಲಿನ ಮನೆಗಳಲ್ಲಿ ಸಾಕಿದ್ದ ನಾಯಿಗಳನ್ನು ಹಿಡಿದು ತಂದು ತಿನ್ನತೊಡಗಿತು. ಸುಮಾರು ಐದಾರು ನಾಯಿಗಳು ಹುಲಿ ಬಾಯಿಗೆ ಬಲಿಯಾದವು. ಇದರಿಂದ ಹಳ್ಳಿಗಳ ನಾಯಿಗಳು ಆತಂಕಕ್ಕೆ ಈಡಾದವು, ಎಲ್ಲ ಮನೆಗಳ ನಾಯಿಗಳು ಒಂದೆಡೆ ಸೇರಿದವು. ಹುಲಿಯನ್ನು ಹೀಗೇ ಬಿಟ್ಟರೆ ನಮ್ಮನ್ನು ಸಂಪೂರ್ಣ ಮುಗಿಸುತ್ತದೆ. ಎಂದುಕೊಂಡು ಅದರ ವಿರುದ್ಧ ಸೆಣಸಲು ಉಪಾಯ ಹೆಣೆದವು. ಕಾಡಿನಲ್ಲಿ ಹುಲಿಯ ಬಗ್ಗೆ ಕೋಪಗೊಂಡಿರುವ ಕಾಡೆಮ್ಮೆಯ ಬಗ್ಗೆ ತಿಳಿದುಕೊಂಡು ಅದರ ಬಳಿ ತೆರಳಿದವು. ಹುಲಿಯಿಂದಾಗುತ್ತಿರುವ ತೊಂದರೆಯನ್ನು ತಿಳಿಸಿದವು. ಹುಲಿಯ ವಿರುದ್ಧ ಹೋರಾಡುವುದಕ್ಕೆ ಹಾಕುವುದಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡವು. ಅದಕ್ಕೆ ಸ್ಪಂದಿಸಿದ ಕಾಡೆಮ್ಮೆ ಎಲ್ಲ ರೀತಿಯ ಮಾರ್ಗದರ್ಶನಗಳನ್ನು ನಾಯಿಗಳಿಗೆ ನೀಡಿತು.

ನಾಯಿಗಳು ಹಳ್ಳಿಯತ್ತ ಬಂದವು, ಕಾಡಿನಲ್ಲಿ ಕಾಡೆಮ್ಮೆ ಮತ್ತು ಹುಲಿ ಭೇಟಿಯಾದವು. ಹಳ್ಳಿಯ ಮನೆಯೊಂದರಲ್ಲಿ ದೊಡ್ಡ ನಾಯಿಯೊಂದಿದ್ದು ಅದನ್ನು ಹಿಡಿದು ತಂದರೆ ನಿನಗೆ ಎರಡು ದಿನ ಆಹಾರ ಸಾಕಾಗುವುದು, ಇಂದೇ ರಾತ್ರಿ ಆ ಮನೆಯ ಅಂಗಳದಲ್ಲಿ ಮಲಗಿರುವ ನಾಯಿಯನ್ನು ಹೊತ್ತು ಕೊಂಡು ಬಾ ಎಂದು ಕಾಡೆಮ್ಮೆ ಹುಲಿಗೆ ಸಲಹೆ ನೀಡಿತು. ಇದರಿಂದ ಖುಷಿಪಟ್ಟಿ ಹುಲಿ ಕಾಡೆಮ್ಮೆಯನ್ನು ಅಭಿನಂದಿಸಿತು. ನಂತರ ಅಲ್ಲಿಂದ ಕಾಲ್ಕಿತ್ತ ಕಾಡೆಮ್ಮೆ ಹಳ್ಳಿಯತ್ತ ಧಾವಿಸಿತು. ನಾಯಿಗಳ ಹಿಂಡಿರುವಲ್ಲಿಗೆ ಬಂದಿತು. ಅವುಗಳಿಗೆ ಹುಲಿ ರಾತ್ರಿ ಇಲ್ಲಿಗೆ ಬರುತ್ತಿರುವುದನ್ನು ತಿಳಿಸಿತು. ಎಲ್ಲರೂ ಸೇರಿ ಅದರ ಮೇಲೆ ದಾಳಿ ಮಾಡುವುದಕ್ಕೆ ಉಪಾಯ ಹೇಳಿತು, ಕಾಡೆಮ್ಮೆ ಹಾಗೂ ನಾಯಿಗಳ ಹಿಂಡು ಮನೆಯ ಅಂಗಳದ ಅಂಚಿನ ಪೊದೆಯಲ್ಲಿ ಹೊಂಚು ಹಾಕಿ ಕುಳಿತವು. ಅಷ್ಟೊತ್ತಿಗೆ ಹೆಜ್ಜೆ ಹಾಕುತ್ತಾ ಬಂದ ಹುಲಿರಾಯ ನಾಯಿ ಎಲ್ಲಿದೆ ಎಂದು ಅಂಗಳದಂಚಿನಲ್ಲಿಯೇ ಸುಮ್ಮನೆ ಕುಳಿತು ನೋಡತೊಡಗಿತು. ಆಗ ಏಕಾಏಕಿ ಕಾಡೆಮ್ಮೆ ಹಾಗೂ ನಾಯಿಗಳು ಹುಲಿಯ ಮೇಲೆ ಎರಗಿ ಕೊಂದು ಹಾಕಿದವು.

ನೀತಿ: ಒಗ್ಗಟ್ಟಿನ ಹೋರಾಟದಿಂದ ಏನನ್ನೂ ಸಾಧಿಸಬಹುದು.

Leave a comment