ಮಾತನಾಡುವ ಅದ್ಭುತವಾದ ಮರಗಳು

ನೂರಾರು ವರ್ಷಗಳ ಹಿಂದಿನ ವಿಷಯ, ಗದುಗಿನ ಗುಂಡಣ್ಣ ಹಡಗಿನಲ್ಲಿ ವರುಷಕ್ಕೊಂದು ಸಲ ವಿದೇಶಕ್ಕೆ ಪ್ರವಾಸ ಮಾಡುತಿದ್ದ. ಹಾಗೆಯೇ ಈ ವರ್ಷವೂ ಹಡಗೊಂದರಲ್ಲಿ ಪ್ರವಾಸ ಹೊರಟ, ಹಡಗು ಬಂದರಿನಿಂದ ಸುಮಾರು ಐವತ್ತು ನಾಟಿಕಲ್ ಮೈಲು ದೂರ ಸಾಗಿತು. ಭಯಂಕರವಾದ ಬಿರುಗಾಳಿ ಬೀಸಲಾರಂಭಿಸಿತು, ಹಡಗು ಆ ಕಡೆ ಈ ಕಡೆ ಓಲಾಡ ತೊಡಗಿತು. ಹಡಗಿನಲ್ಲಿದ್ದವರಿಗೆ ಜೀವಭಯ ಶುರುವಾಯಿತು. ಬಿರುಗಾಳಿಗೆ ಸಿಕ್ಕ ಹಡಗು ನಿಯಂತ್ರಣವನ್ನೂ ಕಳೆದುಕೊಂಡಿತು. ಹಡಗಿನಲ್ಲಿದ್ದವರು ರಕ್ಷಣೆಗಾಗಿ ಎಲ್ಲ ಕಡೆ ಕರೆ ಮಾಡಿದರೂ ಪ್ರಯೋಜನವಾಗಲಿಲ್ಲ. ಕರಾಳ ರಾತ್ರಿಯಾದ್ದರಿಂದ ಎತ್ತ ಹೋಗಬೇಕೆಂದು ತೋಚದಾಯಿತು.

ಜೀವರಕ್ಷಕ ಧರಿಸಿ ಮುಳುಗುವ ಹಡಗಿನಿಂದ ಹೊರಗೆ ಧುಮುಕಿದರು. ಬಿರುಗಾಳಿಗೆ ಎತ್ತೆತ್ತಲೋ ತೇಲುತ್ತಾ ಹೋದರು, ಜೀವ ಕೈಯಲ್ಲಿ ಹಿಡಿದಿದ್ದ ಗುಂಡಣ್ಣ ಸಮುದ್ರದಲ್ಲಿಯ ಜಲಚರಗಳಿಗೆ ಬಲಿಯಾಗದಿದ್ದರೆ ಸಾಕೆಂದು ದೇವರಲ್ಲಿ ಪ್ರಾರ್ಥಿಸಿದ, ಯಾಕಂದ್ರ ದೊಡ್ಡ ಗಾತ್ರದ ತಿಮಿಂಗಲುಗಳು ಅನಾಯಾಸವಾಗಿ ನುಂಗಿಬಿಡಬಹುದು. ಇನ್ನೂ ಎಂಥೆಂಥ ವಿಚಿತ್ರ ಜಲಚರಗಳಿದ್ದಾವೆ. ಎಂಬುದು ಗುಂಡಣ್ಣನಿಗೆ ಗೊತ್ತಿತ್ತು. ಆ ಸಮುದ್ರದಲ್ಲಿ ಒಂದು ಕಡೆ ಬೆಚ್ಚಗಿನ ನೀರು, ಮತ್ತೊಂದು ಕಡೆ ಅತೀಯಾದ ಶೀತ ಇರುವ ನೀರನ್ನು ಕಂಡು ಮೂರ್ಚೆ ಹೋದ, ಕಡೆ ಕಡೆಗೆ ಜೀವದ ಆಸೆಯನ್ನೇ ಬಿಟ್ಟಿದ್ದ. ಬಿರುಗಾಳಿಗೆ ಸಿಕ್ಕ ಗುಂಡಣ್ಣ ಬೆಳಗಾಗುವದರಲ್ಲಿ ಬಳ್ಳಿಮರಗಳಲ್ಲಿ ಬಂಧಿಯಾಗಿದ್ದ. ಮೂರ್ಛೆಯಿಂದ ಎಚ್ಚರವಾದಾಗ ಎಲ್ಲಿದ್ದೇನೆಂಬುವುದೇ ಗೊತ್ತಾಗಲಿಲ್ಲ. ಬಳ್ಳಿಗಳು ಗಟ್ಟಿಯಾಗಿ ಸುತ್ತಿಕೊಂಡಿವೆ. ಮೈ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಾನೆ ಸಾಧ್ಯವಾಗುವುದಿಲ್ಲ. ಅಲ್ಲಿ ಯಾರೋ ಮಾತನಾಡಿದಂತೆ ಕೇಳುತ್ತೆ, ಆರ್ಥವಾಗುತ್ತಿಲ್ಲ. ಆದರೆ ಮನುಷ್ಯರು ಯಾರೂ ಕಾಣುತ್ತಿಲ್ಲ. ಒಂದು ಕಡೆ ತಾನು ಜೀವಂತವಾಗಿ ಉಳಿದಿರುವುದನ್ನು ಖಾತ್ರಿ ಮಾಡಿಕೊಂಡ.

‘ಪರು ಪೂತರು ಪೊ’, ‘ವ್ಯಾಪ್ಯ ಬಾ,’ ಎಂಬ ಶಬ್ದ ತಾನಿರುವಲ್ಲಿಯೇ ಕೇಳಿ ಆಶ್ಚರ್ಯಚಕಿತನಾದ. ನಿಧಾನವಾಗಿ ಸುತ್ತಿ ಕೊಂಡ ಬಳ್ಳಿಗಳು ತನ್ನಿಂದ ತಾನೇ ಬಿಚ್ಚಿಕೊಂಡವು, ಸುಗಂಧ ಪರಿಮಳದ ವಾಸನೆ ಬರುತ್ತಿದೆ. ಮರಗಳು ನಡೆದುಕೊಂಡು ಬರುತ್ತಿವೆ. ಅದರ ಟೊಂಗೆಗಳೆಲ್ಲ ನಾವು ಭಕ್ತಿ ಮಡಚಿದಂತೆ ಮಡಚಿಕೊಳ್ಳುತ್ತವೆ. ಬೇರುಗಳು ಬೇಕೆಂದೇನಿಲ್ಲ. ಮತ್ತೊಂದು ಮರದ ಬೇರಿಗೆ ಜೋಡಿಸಿಕೊಳ್ಳುತ್ತವೆ. ಏನಿದು ವಿಚಿತ್ರ ಮರಗಿಡಗಳು ಓಡಾಡುತ್ತಿವೆ, ಮಾತನಾಡುತ್ತಿವೆ. ಆಶ್ಚರ್ಯವೋ ಆಶ್ಚರ್ಯ, ಹಸಿದಿದ್ದ ಗುಂಡಣ್ಣನ ಮನಸ್ಸನ್ನು ಅರಿತ ಮರಗಳು ಅವನ ಮುಂದೆಯೇ ಬಂದು ನಿಂತು ಪೂರ್ಣ ಫಲಬಿಟ್ಟವು ಗದಗನೇ ಹರಿದು ತಿಂದ, ಹೊಟ್ಟೆ ಬಿರಿಯುವಷ್ಟು ತಿಂದ, ಅಲ್ಲಿಯ ಪ್ರಾಣಿಗಳ ಜೊತೆ ಗೆಳೆತನ ಬೆಳೆಸಿದ.

ಗುಂಡಣ್ಣ ಕಲಿತಿರುವ ಚಿನ್ನಿ ದಾಂಡು, ಬುಗುರಿ, ಕಬಡ್ಡಿ ಆಟಗಳನ್ನು ಅವುಗಳಿಗೂ ಕಲಿಸಿದ. ಹಾಗೆಯೇ ಅಲ್ಲಿಯೇ ಉಳಿದ, ವಾರ, ತಿಂಗಳುಗಳೇ ಕಳೆದವು, ಅವನಿಗೆ ಪ್ರತಿಕ್ಷಣವೂ ಅಲ್ಲಿ ಅಚ್ಚರಿಯಾಗುತ್ತಿತ್ತು. ಒಂದು ದಿನ ಗಿಳಿಯೊಂದು ಹಾರಿ ಬಂದು ಅವನ ಬುಜದ ಮೇಲೆ ಕುಳಿತು ‘ಹಾಯ್, ನೀನು ಇಲ್ಲಿಗೆ ಹೇಗೆ ಬಂದೆ? ಯಾಕೆ ಬಂದಿದಿಯಾ?’ ಎಂದು ಕೇಳಿತು. ಗುಂಡಣ್ಣನಿಗೆ ತನ್ನ ಭಾಷೆಯನ್ನು ಕೇಳಿ ಹೇಳಿಕೊಳ್ಳಲಾರದಷ್ಟು ಖುಷಿಯಾಯಿತು. ಒಬ್ಬನಾದ್ರು ನನ್ನ ಭಾವನೆಯನ್ನು ತಿಳಿಸಲು ಸಿಕ್ಕನಲ್ಲ ಎಂದು ಸಂತೋಷದಿಂದ ಕುಣಿದಾಡಿದ, ತಾನು ಇಲ್ಲಿಗೆ ಬಂದ ಕಥೆಯನ್ನೂ ಹೇಳಿದ. ಗಿಳಿಯೂ ತಾನು ಬಂದು ಸೇರಿದ ಕಥೆ ಹೇಳಿತು, ಹೀಗೆ ಗಿಳಿಯ ಸಹಾಯದಿಂದ ಅಲ್ಲಿಯ ಪ್ರಾಣಿಪಕ್ಷಿಗಳ, ಮರಗಳ ಭಾಷೆಯನ್ನು ಕಲಿತ. ಎತ್ತ ಹೋಗಬೇಕೆಂದು ತಿಳಿಯದೇ ಅಲ್ಲಿಯೇ ಉಳಿದುಬಿಟ್ಟಿ.

ಒಂದೆರಡು ವರ್ಷಗಳ ನಂತರ ಒಂದು ದೊಡ್ಡ ಹಡಗಿನಲ್ಲಿ ನೂರಾರು ಜನರು ಕೊಡಲಿ, ಗರಗಸಗಳನ್ನು ಹಿಡಿದು ಬಂದರು. ದೊಡ್ಡ ದೊಡ್ಡ ಮರಗಳನ್ನು ನೋಡಿ ಖುಷಿಯಿಂದ ಕತ್ತರಿಸಲು ನೋಡಿದರು. ವಿಷಯ ತಿಳಿದ ಮರಗಳು, ಬಳ್ಳಿಗಳು ಅವರನ್ನೆಲ್ಲ ಅಲುಗಾಡದಂತೆ ಬಂಧಿಸಿ ಮುಳುಗಿಸಿ ಬಿಟ್ಟವು. ಇಂಥ ವಿಚಿತ್ರಗಳನ್ನು ಕಂಡು ಬೆರಗಾದ. ಹಲವು ವರ್ಷಗಳ ನಂತರ ತನ್ನ ಊರಿಗೆ ಹೋಗುವ ಬಯಕೆಯನ್ನು ಹೇಳಿದ. ಅವನ ಮನಸ್ಸನ್ನು ಅರಿತ ಮರಗಳು “ಪೆಲಕ್ ಪೆನ್ ಜಿಸಕ್’ ಎಂದವು ಆಗ ಸಮುದ್ರದ ಮೇಲೆ ಸರಾಗವಾಗಿ ಓಡುವ ಕುದುರೆ ಬಂತು. ಆದರ ಬೆನ್ನ ಮೇಲೆ ಹತ್ತಿ ಕುಳಿತ. ಎಲ್ಲವೂ ಅಪ್ಪುಗೆಯನ್ನು ನೀಡಿ ಬೀಳ್ಕೊಟ್ಟವು, ಸ್ವಲ್ಪ ಮುಂದೆ ಸಾಗಿದ, ರಾತ್ರಿಯಾದ್ದರಿಂದ ಎಲ್ಲಡೆ ಕಗ್ಗತ್ತಲು. ನಿದ್ರೆಗೆ ಹೋಗಿದೊಂದೆ ಗೊತ್ತು, ಹೇಗೆ ಬಂದೆ ಎನ್ನುವುದೇ ಗೊತ್ತಾಗಲಿಲ್ಲ. ಬೆಳಗಾಗುವುದರಲ್ಲಿ ಗದುಗಿನಲ್ಲಿದ್ದೆ. ಮನೆಯ ತುಂಬ ಅಷ್ಟೇ ಅಲ್ಲ ಊರ ತುಂಬ ಸುವಾಸನೆ ತುಂಬಿತ್ತು.

ತಾವು ಇಲ್ಲಿಯವರೆಗೂ ತಿಂದಿರದ ಫಲ, ಪುಷ್ಪ ಮತ್ತು ಬಹಳ ವರ್ಷಗಳಿಂದ ನಾಪತ್ತೆಯಾಗಿ ಈಗ ಪ್ರತ್ಯಕ್ಷನಾಗಿದ್ದ ಗುಂಡಣ್ಣನನ್ನು ನೋಡಲು ಊರಿಗೆ ಊರೇ ನೆರೆದಿತ್ತು. ಎಲ್ಲರಿಗೂ ಹಣ್ಣು. ಹೂಗಳನ್ನು ಕೊಟ್ಟು ಕಳಿಸುತ್ತಿದ್ದ.ತನ್ನ ಜೀವನದಲ್ಲಿ ಕಂಡ ವಿಚಿತ್ರ ಘಟನೆಯ ಬಗ್ಗೆ ಗುಂಡಣ್ಣ ಕಟ್ಟೆಯ ಮೇಲೆ ಕುಳಿತು ಮಕ್ಕಳಿಗೆ ಕಥೆ ಹೇಳುತ್ತಿದ್ದ. ಮಕ್ಕಳೆಲ್ಲಾ ಕಥೆ ಮುಗಿದರೂ ಕೇಳುತ್ತಲೇ ಇದ್ದರು. ಅವರ ಕಲ್ಪನಾಲೋಕ ತೆರೆಯುತ್ತಲೇ ಇತ್ತು.

Leave a comment